ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘವು 1985ರಲ್ಲಿ ವಿದ್ಯುಕ್ತವಾಗಿ ರಚನೆಗೊಂಡಿದ್ದು, ಸಂಘದ ಸ್ಥಾಪನೆಗೆ ಕಾರ್ಯನಿರ್ವಹಿಸಿದವರಾದ ದಿ: ಕೆ.ಕೆಂಚೇಗೌಡ, ಆರೋಗ್ಯ ಇಲಾಖೆ, ಶ್ರೀ ಬಿ.ಎಲ್.ಲಿಂಗೇಗೌಡ, ಆರೋಗ್ಯ ಇಲಾಖೆ, ಶ್ರೀ ಜಯದೇವಪ್ಪ, ಕೃಷಿ ಇಲಾಖೆ, ದಿ: ಮಂಜೇಗೌಡ್ರು, ರಾಜ್ಯ ಉಚ್ಛ ನ್ಯಾಯಾಲಯ, ಶ್ರೀ ಎಸ್.ರೇಣುಕಾರಾಧ್ಯ, ಕರ್ನಾಟಕ ಸರ್ಕಾರ ಸಚಿವಾಲಯ, ಇವರುಗಳು ಅವಿರತವಾಗಿ ನಡೆಸಿದ ಪ್ರಯತ್ನವಾಗಿ ಸಂಘವು ರಾಜ್ಯದಲ್ಲಿ ನೆಲೆಗೊಳ್ಳಲು ಸಾಧ್ಯವಾಯಿತು. ಹಾಗೂ ಜಿಲ್ಲೆಗಳಿಗೆ ಪ್ರವಾಸ ಸಂಘಟಿಸಿದ್ದರಿಂದ ಸಂಘವನ್ನು ಬಲಪಡಿಸಲಾಯಿತು. 10 ವರ್ಷಗಳ ನಂತರ 1995ರಲ್ಲಿ ಮೊದಲ ರಾಜ್ಯ ಸಮ್ಮೇಳನವನ್ನು ಐತಿಹಾಸಿಕ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಮೊದಲು ಅಂಗವಿಕಲ ನೌಕರರಿಗೆ ಸಂಬಂಧಿಸಿದ ಯಾವುದೇ ಆದೇಶ, ಸುತ್ತೋಲೆ, ಅಧಿಕೃತ ಜ್ಞಾಪನಗಳು ಒಂದು ಕಡೆ ದೊರಕದೇ ಅಂಗವಿಕಲ ನೌಕರರು ಕಛೇರಿಗಳಿಗೆ ಅಲೆದಾಡಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ಅಂಗವಿಕಲ ನೌಕರರಿಗೆ ಸಂಬಂಧಿಸಿದ ಎಲ್ಲಾ ಆದೇಶಗಳು, ಸುತ್ತೋಲೆಗಳು ಮತ್ತು ಅಧಿಕೃತ ಜ್ಞಾಪನಗಳನ್ನು ಒಂದೆಡೆ ಸೇರಿಸಿ ಮೊದಲನೇ ಸಮ್ಮೇಳನದ ಸಂದರ್ಭದಲ್ಲಿ ಸ್ಮರಣ ಸಂಚಿಕೆ ರೂಪದಲ್ಲಿ ಹೊರತರಲಾಯಿತು. ಸದರಿ ಸ್ಮರಣ ಸಂಚಿಕೆಯು ಅಂಗವಿಕಲ ನೌಕರರಿಗೆ ಕೈಪಿಡಿಯಾಗಿ ಯಶಸ್ವಿಯಾಯಿತು. 2ನೇ ರಾಜ್ಯ ಸಮ್ಮೇಳನವನ್ನು ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಹೆಚ್.ಕೆ.ರಾಮು ರವರ ನೇತೃತ್ವದಲ್ಲಿ ಕಲಾಭವನದಲ್ಲಿ ಯಶಸ್ವಿಯಾಗಿ ಸಂಘಟಿಸಲಾಯಿತು. ಆ ಸಂದರ್ಭದಲ್ಲೂ ಸ್ಮರಣ ಸಂಚಿಕೆಯನ್ನು ಹೊರತರಲಾಯಿತು. ತದನಂತರ ಗುಲ್ಬರ್ಗ ನಗರದಲ್ಲಿ ಶ್ರೀ ಶಾಂತಪ್ಪ ಸಂಗಾವಿ ರವರ ನೇತೃತ್ವದಲ್ಲಿ ವಿಭಾಗೀಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಲಾಯಿತು. ಜಿಲ್ಲಾ ಸಮಾವೇಶಗಳು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಯಶಸ್ವಿಯಾಗಿ ಜರುಗಿವೆ. ಸಂಘದ ಬೆಳ್ಳಿಹಬ್ಬದ ಸಮಾರಂಭವನ್ನು 2013ರಲ್ಲಿ ಪುನ: ಬೆಂಗಳೂರಿನ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಮ್ಮೇಳನಕ್ಕೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಮಿಗಿಲಾಗಿ ಪ್ರತಿನಿಧಿಗಳು ಬಂದು ಪಾಲ್ಗೊಂಡಿದ್ದರು.
ಇದೀಗ ಸಂಘದ ಸ್ಥಾಪನೆಯಾಗಿ 30 ವರ್ಷಗಳಾಗಿದ್ದು, ಸರ್ಕಾರಿ ನೌಕರರ 5ನೇ ವೇತನ ಆಯೋಗದ ಮುಂದೆ ಸಂಘದ ಬೇಡಿಕೆಗಳನ್ನು ಸಮರ್ಥವಾಗಿ ಪ್ರತಿನಿಧಿಸಿದ್ದರಿಂದ, ದೇಶದಲ್ಲಿಯೇ ಅತೀ ಹೆಚ್ಚು ಪ್ರಯಾಣ ಭತ್ಯೆ ಪಡೆಯುವ ರಾಜ್ಯಸರ್ಕಾರಿ ನೌಕರರು ಕರ್ನಾಟಕದವರಾಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಮೂಲ ವೇತನದ ಶೇಕಡ 6ರಷ್ಟು ಪ್ರಯಾಣ ಭತ್ಯೆಯನ್ನು ಇಂದು ರಾಜ್ಯಸರ್ಕಾರಿ ನೌಕರರು ಪಡೆಯುತ್ತಿದ್ದಾರೆ. ಇದರ ಜೊತೆಗೆ ವರ್ಗಾವಣೆಗಳಿಂದ ಹಲವು ರೀತಿಯ ವಿನಾಯಿತಿಗಳು, ವೃತ್ತಿ ತೆರಿಗೆಯಿಂದ ವಿನಾಯಿತಿ, ಆದಾಯ ತೆರಿಗೆಯಲ್ಲಿ 75 ಸಾವಿರ ರೂ.ಗಳಷ್ಟು ವಿನಾಯಿತಿ, ಎ ಮತ್ತು ಬಿ ವರ್ಗದ ನೇಮಕಾತಿಗಳಲ್ಲಿ ಶೇಕಡ 3ರಷ್ಟು ಮೀಸಲಾತಿ, ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ಶೇಕಡ 5ರಷ್ಟು ಮೀಸಲಾತಿ ಇತ್ಯಾದಿ ಸೌಲಭ್ಯಗಳನ್ನು ರಾಜ್ಯಸರ್ಕಾರಿ ನೌಕರರಿಗೆ ದೊರಕಿಸಿಕೊಡುವಲ್ಲಿ ಸಂಘವು ವಹಿಸಿದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಬಡ್ತಿಗಳಲ್ಲಿ ಮೀಸಲಾತಿ ಜಾರಿಗೆ ತರಬೇಕು,ಸರ್ಕಾರಿ ನೌಕರರಿಗೂ ರಿಯಾಯಿತಿ ದರದಲ್ಲಿ ಬಸ್ ಪಾಸು ನೀಡಬೇಕು ಎಂಬ ಬೇಡಿಕೆಗಳು ನೆನೆಗುದಿಗೆ ಬಿದ್ದಿವೆ. ಮುಂದಿನ ದಿನಗಳಲ್ಲಿ ಇವುಗಳ ಈಡೇರಿಕೆಗೆ ಸಂಘವು ಹೋರಾಡಬೇಕಾಗಿದೆ.
ಈ 30ನೇ ವರ್ಷಾಚರಣೆ ಹಾಗೂ ಸಂಘದ ಜೊತೆ 30 ವರ್ಷಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಹಾಲಿ ಗೌರವಾಧ್ಯಕ್ಷರಾದ ಎಸ್.ರೇಣುಕಾರಾಧ್ಯ ರವರು ವಯೋ ನಿವೃತ್ತಿ ಹೊಂದಲಿರುವ ಸಂದರ್ಭದಲ್ಲಿ, ಈ ಅಂಗವಿಕಲ ವ್ಯಕ್ತಿಗಳ ಮಹತ್ವದ ವಿಷಯಗಳ ಬಗ್ಗೆ ಕಾರ್ಯಾಗಾರ ಮತ್ತು ಸಮಾವೇಶವನ್ನು ದಿನಾಂಕ: 28/01/2016ರಂದು ಹಮ್ಮಿಕೊಳ್ಳಲಾಗಿತ್ತು, ಕಳೆದ 30 ವರ್ಷಗಳಿಂದ ಅಂಗವಿಕಲ ನೌಕರರಿಗೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಹಲವಾರು ಆದೇಶಗಳು, ಸುತ್ತೋಲೆಗಳು, ಅಧಿಕೃತ ಜ್ಞಾಪನಗಳು ಹಾಗೂ ಅಂಗವಿಕಲ ನೌಕರರು ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಶ್ಯಕವಾದ ಆದೇಶ, ನಮೂನೆಗಳು ಇತ್ಯಾದಿಗಳನ್ನೊಳಗೊಂಡ ಒಂದು ಕೈಪಿಡಿಯನ್ನು ಹೊರತರಬೇಕೆಂಬ ಇಚ್ಚೆಯೊಂದಿಗೆ ಸಂಚಿಕೆಯನ್ನು ಹೊರತರಲಾಯಿತು. ಇದು ಬೇರೆ ಯಾವುದೇ ಲೇಖನ, ಕವನ, ಕಾವ್ಯಗಳನ್ನು ಒಳಗೊಳ್ಳದೇ, ಕೇವಲ ಉಪಯುಕ್ತ ಮಾಹಿತಿಗಳನ್ನೊಳಗೊಂಡ ಕೈಪಿಡಿಯಾಗಿ ಮೂಡಿ ಬಂದಿದೆ.
ಶ್ರೀ ಎಸ್. ರೇಣುಕಾರಾಧ್ಯ ಇವರ ಪರಿಚಯ
ಶ್ರೀ ಎಸ್. ರೇಣುಕಾರಾಧ್ಯ ಎಂ.ಎ. ಇವರು ಪ್ರಸ್ತುತ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನೀರತರಾಗಿರುತ್ತಾರೆ. ಶ್ರೀ ಎಸ್. ರೇಣುಕಾರಾಧ್ಯ ಇವರು ಎರಡು ವರ್ಷದ ಮಗುವಿದ್ದಾಗ ಪೋಲಿಯೋ ಪೀಡಿತರಾಗಿ ಎರಡೂ ಕಾಲುಗಳು ಅಂಗವೈಕಲ್ಯತೆಗೆ ಒಳಗಾಯಿತು. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಬಡ ರೈತ ಕುಟುಂಬದಲ್ಲಿ ಜನಿಸಿ ಸ್ವಂತ ಊರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪಕ್ಕದ ಊರಿನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಡಿ 1982 ರಲ್ಲಿ ಎಂ.ಎ. ಪದವೀಧರರಾದರು. ಆಗಿನಿಂದಲೇ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆದು ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಆಯ್ಕೆಯಾಗಿ 33 ವರ್ಷಗಳ ಸರ್ಕಾರಿ ಸೇವೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ. ವ್ಹೀಲ್ ಚೇರ್ ಬಳಸಿ ಕಛೇರಿ ಕೆಲಸಗಳನ್ನು ಯಾವುದೇ ಅಡೆ-ತಡೆಯಿಲ್ಲದೇ ನಿರ್ವಹಿಸುತ್ತಾರೆ. ಕರ್ನಾಟಕ ರಾಜ್ಯ ಅಂಗವಿಕಲಸರ್ಕಾರಿ ನೌಕರರ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿ ಹಾಗೂ ಅದರ ಅಧ್ಯಕ್ಷರಾಗಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಅಂಗವಿಕಲ ನೌಕರರನ್ನು ಸಂಘಟಿಸಿ ಅವರಿಗೆ ಹಲವಾರು ಸೇವಾ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ವಿಶ್ವ ಅಂಗವಿಕಲ ದಿನಾಚರಣೆಯನ್ನು ಏರ್ಪಡಿಸಿ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅದೇ ರೀತಿ 1997ರಲ್ಲಿ ವಿಜಯನಗರ ಅಂಗವಿಕಲ ಕಲ್ಯಾಣ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಕಳೆದ 16 ವರ್ಷಗಳಿಂದ ಈ ಸಂಸ್ಥೆಯ ಆಶ್ರಯದಲ್ಲಿ ಶ್ರೀಮತಿ ಯಶೋಧ ಇವರೊಂದಿಗೆ 'ವಿಕಾಸ' ಎಂಬ ವಿಶೇಷ ಶಾಲೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ರಾಜ್ಯದಲ್ಲಿಯೇ ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆಯಾದ A.P.D. ಸಂಸ್ಥೆಯ ಟ್ರಸ್ಟೀ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಗವಿಕಲತೆಯುಳ್ಳ ವ್ಯಕ್ತಿಯಾಗಿ ಇತರರಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಸ್. ರೇಣುಕಾರಾಧ್ಯ, ಇವರಿಗೆ ಹಲವಾರು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.